Friday, 12 July 2013

ಕ್ಷಣ

ಒಂದೊಂದು ದಿನವು
ಒಂದೊಂದು ಕ್ಷಣವು
ರಸದೌತಣವು
ಕಾಲವೆಂಬ
ಮಾಯೆಯೊಳಗೆ
ಮೌಲ್ಯವೆಂಬ
ಭಾವವು
ಬೆರೆತಾಗ
ಒಂದೊಂದು ದಿನವೂ
ಒಂದೊಂದು ಕ್ಷಣವೂ
ರಸಗಳಿಗೆಯು
ಸಿಹಿ-ಕಹಿಗಳೆರಡು
ಸಮನಾಗಿ
ಮನದಲ್ಲಿ
ಮೇಳೈಸಿದಾಗ
ಬದುಕು
ಅರ್ಥಪೂರ್ಣವು...

ನೆನೆಪು

ನೆನೆದವರ
ಮನದಲ್ಲಿ
ನಾವಿರುವನೆಂಬ
ಭಾವಕ್ಕೆ
ಸ್ಪೂರ್ತಿ
ಮನದಾಳದಲ್ಲಿ
ಹೊಯ್ದಾಡುವ
ಸಿಹಿ-ಕಹಿ
ನೆನಪುಗಳು...

ನೆನೆದವರ
ಮನದಲ್ಲಿ
ಅಚ್ಚಳಿಯದೇ
ಉಳಿಯುವ
ಕೈಂಕರ್ಯವು
ನಡೆಯುತ್ತಾ
ಸಾಗಬೇಕು
"ನಂಬಿಕೆ"
ಎಂಬ
ಭಾವದೊಂದಿಗೆ...

ಸೆಳೆತ

ನೀನು ನೋಡಿದ
ಆ ಕ್ಷಣ
ನನ್ನ ಕಣ್ಣು
ಪಕ್ಕಕ್ಕೆ
ಸರಿದ್ದಿತ್ತು
ತುಟಿಯಿಂದ
ಹೊರಡುವ
ಮಾತುಗಳು
ಮೌನವಾಗಿ
ಪದಗಳ
ಹುಡುಕುತ್ತಿತ್ತು
ಮನಸ್ಸು
ಖಾಲಿ ಖಾಲಿಯಾಗಿತ್ತು
ಕಾರಣ
ನನ್ನ ಮನದ
ಮೂಲೆಯಲ್ಲಿ
ನಿನ್ನ ಪ್ರೀತಿಯ
ಸೆಳೆತದ ಕೊಂಡಿ
ಬಿಚ್ಚಿಕೊಂಡಿತ್ತು...!!!

ಚಿಂತೆ

ನೂರೆಂಟು
ಚಿಂತೆ...
ಹುಡುಕುತ್ತಾ
ಸಾಗಿದ
ಮನಸ್ಸಿಗೆ
ಸಿಕ್ಕ
ಉತ್ತರ...
ಚಿಂತೆಯೆಂಬ
ಕಂತೆ,
ಬರೀ
ಬೊಂತೆ...!

ಸ್ನೇಹ

ಮನಸ್ಸಿಗೆ
ಸ್ನೇಹ, ಪ್ರೀತಿಯಲ್ಲಿ
ಅತಿಯಾದ
ಮೋಹವಂತೆ,
ಬಿಟ್ಟಿರಲಾರದ
ಅವಿನಾಭಾವ
ಅನುಬಂಧವಂತೆ,
ಅತಿಯಾದ
ವ್ಯಾಮೋಹ
ಕಳಚಿಕೊಂಡಾಗ...
ಓ... ಮನಸೆ,
ನಿನ್ನಲ್ಲಿ
ತಳಮಳಗಳ
ಪ್ರಳಯವೇ
ಸೃಷ್ಟಿಯಾದಂತೆ...!!

ಮಾಯೆಯೆಂಬ ಬದುಕು

ಬದುಕು
ಮಾಯೆಯೋ?
ಮಾಯೆಯೇ
ಬದುಕೋ?
ಒಂದಕ್ಕೊಂದು
ಅಂಟಿಕೊಂಡಿದೆ
ಮಾಯೆಯೊಳಗಿರುವ
ಬದುಕು,
ಮನಸ್ಸಿನೊಳಗೆ
ಹಿತವೆನಿಸಿದೆಲ್ಲವು
ಪಡೆಯುವುದೇ
ಧ್ಯೇಯ,
ಬೇಕು-ಬೇಡಗಳ
ಸ್ಪಷ್ಟತೆ ಇಲ್ಲದ
ಮನಸ್ಸಿನೊಳಗೆ,
ಎಲ್ಲವೂ
ತನ್ನೊಳಗೆ
ತಾನಾಗಿಸಿಕೊಂಡು
ಕಸದರಾಶಿಯೊಳಗೆ
ಹುಡುಕುವ
ಪರಿ ಎಂತು...!!??

ಕಳೆದುಹೋದವರು

ಒಂದೊಂದು
ಬಾರಿ
ಅನ್ನಿಸಿದು೦ಟು
ಮನಸ್ಸಿನಲ್ಲಿ
ಉಳಿಯಬೇಕಾದವರೂ,
ನನ್ನ
ಮನಸ್ಸಿನ
ಭಾವಗಳ,
ಗೊಂದಲದ
ಪ್ರತಿಫಲವೋ
ಏನೋ
ನನ್ನಿ೦ದ
ದೂರವಾದವರುಂಟು,
ನಾ
ಭಾವಗಳರಿಯದೆ
ಕಳೆದುಕೊಂಡ
ಭಾವ
ಮನದಲ್ಲಿ
ಸದಾ
ಕಾಡುವುದು...

ಬಂಧನ

ಗೂಡು
ಕಟ್ಟಿಹುದು
ಹಕ್ಕಿಯೊಂದು
ಹುಟ್ಟುವ
ಮರಿಗಳಿಗೆಂದು,
ರೆಕ್ಕೆ-ಪುಕ್ಕ
ಬಲಿತ
ನಂತರ...
ಅದೆಲ್ಲೋ...!?
ಇದೆಲ್ಲೋ...!?
ಸಂಬಂಧಗಳ
ಗೊಡವೆಯಿಲ್ಲದೆ
ಸ್ವಚ್ಛಂದವಾಗಿ
ಬದುಕಿಗಾಗಿ
ಆಹಾರ
ಹುಡುಕುತ್ತಾ
ಸಾಗುವುದು...!!

ಮಧುರತೆ

ಕನಸು
ಕಟ್ಟುವಾಸೆ,
ಕಟ್ಟುವ
ಕನಸು
ಹೇಗಿರಲಿ
ಎಂಬ
ಚಿಂತೆ...
ಕಟ್ಟಿದರೆ
ಸ್ವಾರ್ಥವಿಲ್ಲದ
ಮನಸ್ಸುಗಳ
ನಡುವೆ,
ಮಧುರವಾದ
ಸಂಬಂಧಗಳ
ನಡುವೆ,
ತೇಲಿಹೋಗುವಾಸೆ...!!

ಕನಸು

ಬಣ್ಣ ಬಣ್ಣದ
ಕನಸುಗಳು
ಅಂದು
ಒಂದೇ
ಎರಡೇ
ಲೆಕ್ಕವಿಲ್ಲದಷ್ಟು
ಕನಸು
ಕಟ್ಟುವ
ಮನಸು
ಹೊಚ್ಚ ಹಸಿರಾಗಿತ್ತು
ಇಂದು
ಸೋಲು
ಗೆಲುವಿನ
ಲೆಕ್ಕಚಾರದಲ್ಲಿ
ಕನಸು
ಕಟ್ಟುವ
ಕೋಟೆ
ಕುಸಿಯುತಿರುವುದು...!?

ಚಿಂತೆ

ವಯಸ್ಸಿನ
ಅರಿವಿಲ್ಲದೆ
ಯೋಚಿಸುವುದು
ಮನಸ್ಸು,
ಮನಸಿಗೆಕೆ
ವಯಸ್ಸಿನ
ಚಿಂತೆ,
ಸಾವು
ಹತ್ತಿರ
ಬಂದಾಗಲೂ
ಅಲ್ಲಿಯು
ಚಿಂತೆಗಳ
ಸಂತೆ...!?

Thursday, 13 June 2013

ಕುತೂಹಲ

ಕಣ್ಣಿನೊಳಗೆ
ಭಾವದ
ಪ್ರತಿಬಿಂಬ
ಪ್ರತಿಬಿಂಬದೊಳಗೆ
ಪ್ರೇಮವೋ
ಸ್ನೇಹವೋ
ಮೋಹವೋ
ಅಸೆಯೋ
ಅರಿಯದ
ಮನಕ್ಕೆ
ಅದರ
ನಿರೀಕ್ಷೆಯಲ್ಲಿ
ಕುತೂಹಲವೂ...!?

Wednesday, 16 January 2013

ನಿರ್ಲಿಪ್ತತೆ

ನೋವು,
ದುಃಖ-ದುಮ್ಮಾನ
ಮನದ
ಮೂಲೆಯಲ್ಲಿ
ಭಾರವಾದ
ಎಳೆಯಲ್ಲಿ
ಪರಿಹಾರ
ಸಿಗದೆ
ಸೆಣಸುತ್ತಿತ್ತು
ಕೊನೆಗೊಂದು
ಕ್ಷಣ
ಮನದ
ಮೂಲೆಯಿಂದ
ಹೊರಬಂದು
ಕಣ್ಣೀರೆಂಬ
ಭಾವ
ಅದರ
ಎಳೆಎಳೆಯನ್ನು
ಕಿತ್ತುಹಾಕಿ
ನಿರ್ಲಿಪ್ತವಾಯಿತು
ಮನ...!!!

ದಾರಿ

ಕಾಣದಿಹ
ನೂರೆಂಟು
ದಾರಿಗಳು
ತೆರೆದುಕೊಂಡು
ಸಾಗುವುದಿಲ್ಲಿ

ತೆರೆದುಕೊಂಡ
ಎಷ್ಟೋ
ದಾರಿಗಳಲ್ಲಿ
ನಾ ಇಟ್ಟ
ಹೆಜ್ಜೆಯ
ಗುರುತಿನ
ಸ್ಪಷ್ಟ
ಚಿತ್ರಣವಿಲ್ಲದೆ
ಸಾಗುವುದಿಲ್ಲಿ

ಸಾಗುವ
ದಾರಿ
ಮಾತ್ರ
ನಿಗೂಢವಾಗಿ
ಅರಿಯುವ
ಮುನ್ನವೇ
ಎಲ್ಲವೂ
ಘಟಿಸುತ್ತಾ
ಸಾಗುವುದಿಲ್ಲಿ...!!??

ಸಿರಿ

ಹುಟ್ಟಿದಾಕ್ಷಣ
ಇರಲಿಲ್ಲ
ಬಂಗಲೆ, ಹಣದ
ಕಾರುಬಾರು,
ಇಂದು
ಮನದಲ್ಲಿ
ಆವರಿಸಿಕೊಂಡಿಹುದು
ಅದರ ಮೇಲಿನ
ವ್ಯಾಮೋಹದ
ಮಮಕಾರ...!!!???

ನೋವು-ನಲಿವು

ದುಗುಡ ದುಮ್ಮಾನದೊಂದಿಗೆ
ಒತ್ತಿ ಬರುತ್ತಿರುವ
ಅದೆಷ್ಟೋ ಕಣ್ಣೀರಿನ
ಹನಿ ಹನಿಗಳ
ಭಾವದ ನೋವ
ಅರಿಯುವ ಮನಸಿಲ್ಲದೇ
ಮನೋವಿಕೃತಿಯೇ
ಮೇಲಾಯಿತೇ..!!??

ಅರಿವಿಲ್ಲದ
ಪಶು-ಪಕ್ಷಿಗಳ ಮನ
ಪ್ರೀತಿಯ ಸೆಳೆತದ
ಮೋಡಿಗೆ ಬಲಿಯಾಗಿ
ನೋವನ್ನುಂಟು ಮಾಡದ
ಭಾವದೊಂದಿಗೆ
ಒಲವನ್ನರಸಿ
ಬದುಕುವಾ
ಮೋಡಿಗೆ
ಆದರ್ಶವಾಗಿಹವು..!!??

ಅರಿವುಳ್ಳ
ಮನಸ್ಸಿದ್ದು,
ಅರಿಯುವ
ಹೃದಯವಿದ್ದು
ಪಶು-ಪಕ್ಷಿಗಳಿಗಿಂತ
ಕೀಳಾದ
ಮನೋವಿಕೃತಿಯೇ
ವಿಜೃಂಭಿಸಬೇಕಿತ್ತೇ
ನಿನ್ನಲ್ಲಿ....!!!???

ಅರಳುವ ಮುನ್ನ

ಮೊಗ್ಗಾಗಿ
ಅರಳುವ
ಹೂವೊಂದು
ಮಧುರತೆಯ
ಭಾವವ
ಸವಿಯುವ
ಮುನ್ನ
ಚಿವುಟಿ
ಹಾಕಿದರಿಲ್ಲಿ
ಹಾಳು
ಮನಸಿನ
ಹೃದಯಹೀನರು..!?

ಸಮಸ್ಯೆ

ಒಂದೊಂದು ಬಾರಿ
ಅನ್ನಿಸುವುದುಂಟು
ಕೆಲವರ
ಪಾಲಿನ
ಸಣ್ಣ ಪ್ರಮಾಣದ
ಸಮಸ್ಯೆ
ನನ್ನಲ್ಲಿ ದೊಡ್ಡ
ಪ್ರಮಾಣದಲ್ಲಿಯೂ
ದೊಡ್ಡ ಪ್ರಮಾಣದ
ಸಮಸ್ಯೆ
ಸಣ್ಣ ಪ್ರಮಾಣದಲ್ಲಿಯೂ
ನೋವುಂಟು
ಮಾಡಿರುವುದುಂಟು
ಚಿಕ್ಕದು-ದೊಡ್ಡದು
ಎನ್ನುವುದು
ಮನಸ್ಸಿನ
ಭಾವನೆಯಷ್ಟೇ
ಮನದಲ್ಲಿ
ಉಂಟಾಗುವ
ನೋವಿನ
ಪರಿಣಾಮ ಮಾತ್ರ
ಭಿನ್ನವಾಗಿ
ಬೇರ್ಪಟ್ಟಿಹುದು..!!

ನೋವು-ಕಣ್ಣೀರು

ಮನದಲ್ಲಿ
ಅದೇಷ್ಟೋ
ನೋವುಗಳು
ಎಲ್ಲವೂ
ಹಂಚಿಕೊಳ್ಳುತ್ತಿತ್ತು
ಕಣ್ಣೀರು...!!
ಕಣ್ಣೀರು
ಬತ್ತುವ
ಮುನ್ನ
ನೋವುಗಳೆಲ್ಲ
ಮಾಯವಾಗಬಾರದೇ...!!!???

ಸ್ವಾರ್ಥ

ಕಿಟಕಿಯ
ಹೊರಚಾಚಿದ
ಮನಸ್ಸು,
ಎಲ್ಲವನ್ನ
ದಿಟ್ಟಿಸುತ್ತಿದ್ದ
ಕಣ್ಣು
ಸಂದೇಶಗಳು
ಒಂದಕ್ಕೊಂದು
ರವಾನೆಯಾಗುತ್ತಿದ್ದವು
ನೀ ಎಷ್ಟು
ಸ್ವಾರ್ಥಿಯಾದೆ
ನಿನ್ನಗಾಗಿ
ಒಂದಿಂಚು
ಅಲುಗಾಡದೆ
ನೀ ನೆಟ್ಟ
ಜಾಗದಿಂದ
ನಿನ್ನ ಉಸಿರಲ್ಲಿ
ಜೊತೆಯಾಗಿರುವ
ನನಗೆ ಒಂದಿಷ್ಟು
ನಿರುಣಿಸಲಾರದ
ಮನಸ್ಥಿತಿ
ನಿನ್ನದಾಯಿತಲ್ಲ
ಎಂದು
ಸಂಪಿಗೆ ಮರ
ಅಣುಕಿಸುತ್ತಿತ್ತು...!!!

ಬಾಲ್ಯ


ಅಂದು ನಾ
ಕಳೆದ ಬಾಲ್ಯ
ಯೌವನದ
ಮಧುರತೆಯ
ಭಾವಗಳು
ಮತ್ತೆಂದೂ
ಬಾರದೆಂದು
ಅರಿವಿದ್ದಿದ್ದರೇ
ಇನ್ನೆಷ್ಟೋ
ಮಧುರತೆಯ
ಭಾವವನ್ನ
ಸವಿಯಬಹುದಿತ್ತೋ!!!???
ಆದರೆ ಇಂದು
ತನ್ನದಾಗಿಸಿಕೊಳ್ಳುವಲ್ಲಿ
ವಿಫಲವಾದ ಭಾವ
ಕಾಡುವುದು
ಅಲೆ ಅಲೆಯಾಗಿ...!!!

ಆಸೆ

ಇರಬೇಕು
ಎನ್ನುವ
ಮನಸ್ಸು
ಕದ್ದುಮುಚ್ಚಿ
ಕೂಡಿಡುವ
ಮನಸ್ಸು
ಮುಕ್ತಿ
ಕರುಣಿಸಲಿಲ್ಲ
ಇಟ್ಟಿದ್ದಕ್ಕೆ
ಇಡುವುದರಲ್ಲಿ
ಅದೇನೋ
ಆನಂದ
ಇಟ್ಟಿದ್ದು
ಎಲ್ಲೆಲ್ಲಿ
ಎಂಬದರಿವಿಲ್ಲ
ಅದರ
ಉಪಯೋಗದ
ಅರಿವಿಲ್ಲ
ಅರಿವಿದ್ದರೂ
ಉಪಯೋಗಿಸುವ
ಮನಸ್ಸಿಲ್ಲ
ಕೊನೆಗೂ
ಯಾರಿಗೂ
ನೀಡದೇ
ತಾನು
ಅನುಭವಿಸಿದೆ
ಪರರ
ಸ್ವತ್ತಾಗಿಹುದು..!!!

ಪ್ರೀತಿ

ನೀ ಇಲ್ಲದ
ಭಾವದರಿವ
ಅರಿವಾದಡೆ
ಮನ
ಒಂದಷ್ಟು
ತಳಮಳದ
ಭಾವ
ಏರ್ಪಟ್ಟಿತ್ತು
ಯಾಕೋ,
ಏನೋ
ನೀ ನನ್ನ
ಮನದಲ್ಲಿ
ಭಾವನಾತ್ಮಕ
ಸಂಬಂಧವ
ಗಟ್ಟಿಯಾಗಿ
ಬಿಟ್ಟುಹೋಗಿದೆ
ಅದು ನಿನ್ನರಿವೆಗೆ
ಬಂದಿದ್ದರೂ
ಮನಸ್ಸು,
ಒತ್ತಡದ ಸ್ಥಿತಿಗೆ
ಬಲಿಯಾಗಿ
ಎಲ್ಲವನ್ನ
ಬಿಟ್ಟುಹೋಗಿತ್ತು..!!!

ಬಯಕೆ

ಬಯಕೆಗಳ
ಗೂಡಿನೊಳಗೊಂದು
ಸುತ್ತು, ಅಲ್ಲಿತ್ತು
ತರಾವರಿ ಬಯಕೆಗಳು
ಒಂದಕ್ಕೊಂದು
ಸಂಬಂಧವಿಲ್ಲದೆ
ಒಂದಕ್ಕೊಂದು
ನಿರ್ಬಂಧವಿಲ್ಲದೆ
ಹರಿದಾಡುತ್ತಿತ್ತು
ಒಳಹೊಕ್ಕಂತೆ
ಬೆಚ್ಚಿಬಿಳಿಸುವಷ್ಟು
ಬಯಕೆಗಳು
ಅದಕ್ಕೆ ಏನೋ
ಮುಪ್ಪಿಗೂ
ಬಿಡದೆ
ಕಾಡುವುದು
ಬಯಕೆಗಳ ಗೂಡು...!!!