Thursday, 30 August 2012

ಅರಿವು

ಹನಿ ಹನಿ ನೀರು
ಹರಿದು ನದಿಯಾಗಿ
ಸಮುದ್ರದೊಂದಿಗೆ
ಬೇರೆಯುವ ಹಾಗೆ
ಮನದಲ್ಲಿರುವ
ಒಂದೊಂದು
ವಿಚಾರದರಿವು
ಬೆಳೆಯುತ್ತಾ
ಬೆಳೆಯುತ್ತಾ
ಜ್ಞಾನ ದೇಗುಲದೊಳಗೆ
ಸಾಗಿ ಜ್ಞಾನದ
ಹಸಿವಾ ನೀಗಿಸಿಕೊಳ್ಳುತ್ತಾ
ಸಾಗುತ್ತದೆ ...!!!

Tuesday, 28 August 2012

ನೋಟ

ಇರುವೆಗಳ
ಸಾಲು ಸಾಲು
ಶಿಸ್ತುಬದ್ಧ
ಸಾಗುವಿಕೆ
ಮುಂದಿನದರ
ಹಿಂದೆ ಹಿಂದೆ
ತನಗಾಗಿ
ಏನು ಅಲ್ಲ
ಎಲ್ಲವೂ ಅವ
ನಡೆಸಿದಂತೆ
ಎನ್ನುವಂತೆ
ಸಾಗುತಿಹದು
ಬುದ್ಧಿಕೊಟ್ಟ
ಮನುಜಗೆ
ಪ್ರಶ್ನೆ ಮಾಡುವ
ಮನ ಕೊಟ್ಟು
ಪ್ರತಿಯೊಂದರಲ್ಲೂ
ಪ್ರಶ್ನಾರ್ಥಕ ಚಿಹ್ನೆ..!!!

Monday, 27 August 2012

ಧ್ಯಾನ

ಉಸಿರು ಉಸಿರಲ್ಲಿ
ಅಡಗಿಹದು
ಜೀವದ ಚೈತನ್ಯ
ಬಂದ ಉಸಿರೆಷ್ಟೋ
ಹೋದ ಉಸಿರೆಷ್ಟೋ
ಬಂದಿದ್ದು ಹಾಗೆ
ಹೋಗಿದ್ದು ಹಾಗೆ
ಬಂದುಹೋದ್ದದರಿವು
ಮನದಲ್ಲಿ ಮೂಡಿದ್ದರೇ
ಧಾನ್ಯದ ಸ್ಥಿತಿಯ
ಭಾವವೇರ್ಪಡುತ್ತಿತ್ತೋ
ಏನೋ ಗೊತ್ತಿಲ್ಲ !!!

Saturday, 25 August 2012

ಸಮಾನತೆ


ಸಮಾನತೆಯ
ಭಾವ ಹುಡುಕುತ್ತಾ
ಸಾಗುತ್ತಿತ್ತು ಮನ...

ವೃತ್ತಿಯಲ್ಲಿ
ಆಹಾರದಲ್ಲಿ
ಕಿರಿಯರಲ್ಲಿ
ಹಿರಿಯರಲ್ಲಿ
ಬುದ್ದಿಜೀವಿಗಳಲ್ಲಿ
ಹೀಗೆ ಹುಡುಕುತ್ತಾ
ಸಾಗಿದ ಮನಕ್ಕೆ

ಸಮಾನತೆಯು
ಇರಬೇಕಾದ
ಕಡೆ ಇಲ್ಲವಾಗಿಹ
ಭಾವ ಕಾಡುತ್ತಾ,
ಕ್ಷೀಣಿಸುತ್ತಾ
ಸಾಗಿಹುದಿಲ್ಲಿ

ಪೈಪೋಟಿಯೆಂಬ
ಈ ಜಗದಲ್ಲಿ
ಅದ ಕಾಣುವ
ಮನಸ್ಸು ಇಂದು
ಇದ್ದರೂ
ಇಲ್ಲದಂತಾಗಿಹುದು

ಕೊನೆಗೊಂದು ದಿನ
ಸಮಾನತೆ
ಎಂಬ ಪದದ ಅರ್ಥ
ಹುಡುಕುವ
ಪರಿ ಸೃಷ್ಟಿಯಾದರೇ
ಆಶ್ಚರ್ಯವಾಗುವುದಿಲ್ಲವೆನೋ...!!!

Thursday, 23 August 2012

ವಿಪರ್ಯಾಸ

ನೋವು ನಲಿವು
ಮನಸ್ಸಿನ
ಪರಿಕಲ್ಪನೆಯಷ್ಟೇ
ನೋವಿಗೆ ದುಖಃ
ನಲಿವಿಗೆ ಸಂತೋಷ
ವ್ಯಕ್ತವಾಗುವ
ಭಾವವಷ್ಟೇ
ಮನಸ್ಸು ಬಯಸುವ
ಸುಖದರಿವು ಸುಖದ
ಕೊನೆಯತ್ತ
ಸೂಚಿಸುತ್ತಾ
ಸಾಗಿದರೇ
ನೋವು ಅರಿವು
ಪಡೆಯುವುದರತ್ತ
ಸಾಗುತ್ತದೆ,
ವಿಪರ್ಯಾಸ
ಮನಸ್ಸಿನ ಬಯಕೆ
ಮಾತ್ರ ಸುಖದರಿವು..!!

Wednesday, 22 August 2012

ಕನಸು-ನನಸು

ಭವ್ಯ ಕನಸೊಂದು
ಬಂದು ನಿಂತತೆ
ಭವ್ಯತೆಯ
ಅನಾವರಣವಾದಂತೆ
ನೋಡು ನೋಡುತ್ತಿದ್ದಂತೆ
ಕನಸುಗಳೆಲ್ಲವೂ
ಸಾಕಾರವಾದಂತೆ
ಕಂಡ ಮನಕ್ಕೆ
ಎಚ್ಚರಿಕೆಯ
ಸಂದೇಶವೊಂದು
ರವಾನೆಯಾದಂತೆ
ಭಾಸವಾಗಿಹುದು
ಓ ಮನವೇ
ಇದು ಕನಸಿನ ಲೋಕ
ನೈಜತೆಯ ಲೋಕದಲ್ಲಿ
ಕಂಡಿದೆಲ್ಲವೂ
ಸಾಕಾರಗೊಳ್ಳಲು
ಪರಿಶ್ರಮವೆಂಬ
ಭಾವದೊಂದಿಗೆ
ನಡೆದಾಗ ನಿನ್ನ ಕನಸು
ನನಸಾಗುವುದಿಲ್ಲಿ...!!

Tuesday, 21 August 2012

ಕಟ್ಟುಪಾಡು

ಹೇ ಮನುಷ್ಯ ಜೀವವೇ
ನೀನೊಂದು
ಜೀವಿಯಾಗಿರದೇ
ಯಾಕಾಗಿ ಜಾತಿಯ
ಕಟ್ಟುಪಾಡುಗಳ
ಸೃಷ್ಟಿಸಿಕೊಂಡೆ!!
ನೀ ಸೇವಿಸುವ
ಗಾಳಿ, ನೀರು
ಬೆಳಕು
ಎಲ್ಲವೂ ಒಂದೇ
ಆದರೆ ನೀ ಸೃಷ್ಟಿ
ಮಾಡಿಕೊಂಡ
ಜಾತಿಯ
ಅನಿರ್ವಾಯತೆ
ನೀ ಅತೀ
ಬುದ್ದೀವಂತ
ಜೀವಿಯೆಂಬ
ಭಾವಕ್ಕಾಗಿಯೇ
ಎಂಬ ಭಾವ
ಕಾಡುತಿಹದು
ನೀ ಸೃಷ್ಟಿಸಿಕೊಂಡ
ಹಲ ದೇವರುಗಳ
ಭಾವವೂ ಕೂಡ
ಗೊಂದಲದ
ಗೂಡಾಗಿಹುದು
ಎಲ್ಲವೂ ಗೊಂದಲವ
ಸೃಷ್ಟಿ ಮಾಡುವ ನೀ
ಯಾವುದರ ಪರಿವೇ
ಇಲ್ಲದ ಪ್ರಾಣಿ
ಸಂಕುಲವು
ನೆಮ್ಮದಿಯ
ಬದುಕ ಸವಿಯುತಿವೆ
ಇಂದು ಅಲ್ಲಿ!!!

Thursday, 16 August 2012

ನೋವು - ನಲಿವು

ನೋಡುತ್ತಾ ನೋಡುತ್ತಾ ಸಾಗಿದಂತೆ ಕಾಲ ಸರಿಯುವುದು ಅರಿವಾಗಲಿಲ್ಲ, ಕಳೆದ ಕಾಲದಲ್ಲಿ ಘಟಿಸಿದ ನೋವು -ನಲಿವಿನ ಚಿತ್ರಣ ಮಾತ್ರ ಮನದ ಮೂಲೆಯಲ್ಲಿ ಕಾಯ್ದಿರಿಸಿಕೊಂಡು ಸಾಗುತ್ತಿದೆ ಬದುಕು, ಬದುಕೇ ಹಾಗೆ ಹಳೆಯ ಮಧುರವಾದ ನೆನಪುಗಳೊಂದಿಗೆ ಹೊಸತನವನ್ನು ಹುಡುಕುತ್ತಾ ಸಾಗುತ್ತಿದೆ.
ಈ ಸಾಗುವಿಕೆಯಲ್ಲಿ  ನಡೆದಾಡಿದ ರಸ್ತೆ, ಊರು, ಮನೆ, ಎಲ್ಲವೂ ನಮ್ಮ ಅನುಕೂಲತೆಗೆ ತಕ್ಕಂತೆ ಬದಲಾಯಿಸಿಕೊಂಡು ಸಾಗುತ್ತಿದ್ದೇವೆ, ಬದುಕಿಗೆ ಬದಲಾವಣೆ ಅನಿವಾರ್ಯವೇ  ಅನ್ನಿಸುತ್ತದೆ, ಎಲ್ಲರೂ ಬದಲಾದ್ದಂತೆ ನಾವು ಬದಲಾಗಬೇಕು ಎನ್ನುವ ಧೋರಣೆ ಮನದ ಮೂಲೆಯಲ್ಲಿ ಎಚ್ಚರಿಸಿ ಬದಲಾದ ಪರಿಸ್ಥಿತಿಗನುಗುಣವಾಗಿ ಸಾಗುತ್ತಿದ್ದೇವೆ. 
ಯಾವುದೋ ಒಂದು ಶಕ್ತಿ ನಮ್ಮನ್ನು ಕರೆದುಕೊಂಡು ಹೋಗುತ್ತಿರುವಂತೆ ಭಾಸವಾಗುತ್ತಿದೆ ನಮಗೆ, ನಾವು ನಮ್ಮ ಹಿತಕ್ಕಾಗಿ ಎಷ್ಟೋ ಅನಗತ್ಯವಾದ ಬದಲಾವಣೆ ಮಾಡಿಕೊಳ್ಳುವುದರ ಹಿಂದೆ ನಮ್ಮ ಸ್ವಾರ್ಥ ಅಡಗಿದೆ ಅನ್ನಿಸುತ್ತದೆ, ಯಾಕೆ ಹೀಗೆ ಎಂದರೆ ಉತ್ತರವಿಲ್ಲದ ನೋಟ, ಆಧುನಿಕತೆಯ ನವನವೀನಾ ಮಾದರಿಯ ಮನೆ, ಎಲೆಕ್ಟ್ರಾನ್ ಉತ್ಪನ್ನಗಳು, ತಂತ್ರಜ್ಞಾನದ ಪರಿಧಿಯಲ್ಲಿ ಬರುವ ಅವಶ್ಯಕತೆ ಇಲ್ಲದಿದ್ದರು ಇರುವಂತೆ ಬಿಂಬಿಸುತ್ತಿರುವ ಮೊಬೈಲ್, ಏನೆಲ್ಲ ಬಂದುಬಿಟ್ಟವು ಕಳೆದ 20 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆ.
ಯಾವುದು ಇಲ್ಲದ ಅಂದಿಗೂ ಇಂದಿಗೂ ಹೊಲಿಕೆ ಅಜಗಜಾಂತರ. ಈ 20 ವರ್ಷಗಳಲ್ಲಿ ಇಷ್ಟೊಂದು ಬದಲಾವಣೆ ಆಗುತ್ತದೆ ಎಂದು ಅಂದು ಹೇಳಿದ್ದರೇ ಯಾರು ನಂಬುತ್ತಿರಲಿಲ್ಲವೇನೋ ಅಂದಿನವರು. ಎಷ್ಟೊಂದು ಬದಲಾವಣೆ ಇಂದು. ಅಂದು ಮನೆ ಮನೆಗೆ ವಿದ್ಯುತ್ ದೀಪಗಳು ಬಂದಾಗ ಜನರ ಮನದಲ್ಲಿ ಎಷ್ಟೊಂದು ಸಂಭ್ರಮ ನೆಲೆಸಿತ್ತೋ ಗೊತ್ತಿಲ್ಲ,  ಅದೇ ರೀತಿ  ತಂತ್ರಜ್ಞಾನ ಪರಿಧಿಯೊಳಗೆ ಬಂದ ಮಾಂತ್ರಿಕ ಎಂದು ಬಿಂಬಿತವಾದ ರೇಡಿಯೋದಿಂದ ಬರುವ ಧ್ವನಿಯನ್ನು ಕೇಳಿ ಜನರ ಮನಸ್ಸಿನಲ್ಲಿ ಇಂದೊಂದು ಮಾಂತ್ರಿಕ ಪೆಟ್ಟಿಗೆ ಅನ್ನಿಸಿಬಿಟ್ಟಿತ್ತು,  ಅದನ್ನು ಹೊಂದಿದವರೇ ಶ್ರೀಮಂತರು ಎನ್ನುವ ಭಾವ, ಜೊತೆಗೆ ಅದರಿಂದ ಬರುವ ಸಂಗೀತ, ನಾಟಕಗಳು, ವಾರ್ತೆಗಳ ಸವಿಯನ್ನು ರೇಡಿಯೋ ಹೊಂದಿದವರ ಮನೆ ಜಗಲಿಯಲ್ಲಿ ಜನಜಂಗಲಿಯೇ ಕಾಣಬಹುದಾಗಿತ್ತು.
ಇನ್ನೂ ನಾಟಕಗಳೇ ಪ್ರಧಾನವಾಗಿದ್ದ ಕಾಲವದ್ದು, ನಾಟಕದಲ್ಲಿ ಅಭಿನಯಿಸಿದ ಕಲಾವಿದರು ಕಣ್ಣಲ್ಲಿ, ಮನದಲ್ಲಿ ತುಂಬಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಕಾಲವದು. ಕಾಲದ ಪರಿಧಿಯಲ್ಲಿ ರೈತಾಪಿ ಜನರಿಗೆ ತಮ್ಮ ದೈಹಿಕ ದಣಿವಾರಿಸಿಕೊಳ್ಳಲು, ಮನಸ್ಸನ್ನು ಉಲ್ಲಾಸವಾಗಿರಿಸಲು ಅಂದು ನಾಟಕವೇ ಪ್ರಧಾನವಾಗಿತ್ತು. ನಾಟಕಗಳಲ್ಲಿ ರಾಮಾಯಣ, ಮಹಾಭಾರತದ ಕೆಲವೊಂದು ಭಾಗಗಳ ಆಯ್ಕೆ ಮಾಡಿಕೊಂಡು ನಾಟಕ ಮಾಡುತ್ತಿದ್ದ ಕಾಲವದ್ದು, ಅಂತಹ ಕಾಲದಲ್ಲಿ ನಾಟಕದಲ್ಲಿ ಬರುವ ಪಾತ್ರಧಾರಿಗಳೇ ಮೇಲುಗೈ ಸಾಧಿಸುತ್ತಿದ್ದರು. ರಾಮಾಯಣ, ಮಹಾಭಾರತದಲ್ಲಿ ಬರುವ  ಪಾತ್ರಧಾರಿಗಳಾದ ಶ್ರೀಕೃಷ್ಣ, ಶ್ರೀರಾಮಚಂದ್ರ, ಯುದಿಷ್ಠರ, ಕರ್ಣನ ಪಾತ್ರಗಳು ಹಾಗೂ ಅವರಲ್ಲಿರುವ ಒಳ್ಳೆಯ ನಡವಳಿಕೆಗಳನ್ನೇ ಮೈದುಂಬಿಸಿಕೊಳ್ಳುವುದೇ ಹೆಚ್ಚು. ನ್ಯಾಯಪರವಾದ ಪಾತ್ರಗಳನ್ನು ನೋಡಿ ನೋಡಿ, ಅದನ್ನು ತಮ್ಮಲ್ಲಿಯು ಅಳವಡಿಸಿಕೊಳ್ಳುತ್ತಿದ್ದರು.
ಸಹಕಾರದ ವಿಷಯದಲ್ಲಿ ಮಾತ್ರ ಹಸಿವು ಎಂದು ಬಂದಾಗ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು, ಅವನಿಗೆ ಬದುಕುವ ಸ್ಥೈರ್ಯವನ್ನು ತುಂಬ ಕೆಲಸ, ಬದುಕುವ ರೀತಿ ನೀತಿಗಳ ಪಾಠ ಹಿರಿಯರಿಂದ ಆಗುತ್ತಿತ್ತು, ಜೊತೆಗೆ ಆತನಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವಂತಹ ಕೆಲಸ ಕೂಡ ನಡೆಯುತ್ತಿದ್ದವು, ನ್ಯಾಯದ ಕಟ್ಟೆಯಲ್ಲಿ ಯಾರೊಬ್ಬರಿಗೂ ನೋವಾಗದಂತೆ ನ್ಯಾಯಪರವಾದ ತೀರ್ಪುಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದರು.
ತನ್ನ ಊರು-ಕೇರಿಯ ಬಗೆಗಿನ ಅಭಿಮಾನ, ಅವುಗಳೊಡಗಿನ ಒಡನಾಟ ಹೆಚ್ಚು ಪ್ರೀಯವಾಗಿತ್ತು, ತನ್ನ ಹೊಲ, ತೋಟ, ತಾನು ಬೆಳೆದ ತೆಂಗು, ಮಾವು, ಧವಸಧಾನ್ಯಗಳ ಬಗೆಗಿನ ಕಾಳಜಿ, ತಾನು ಸಾಕಿದ ರಾಸುಗಳ ಬಗೆಗಿನ ಕಾಳಜಿಯುಕ್ತ ನೋಟ ಎಲ್ಲವೂ ಒಂದು ಶಿಸ್ತುಬದ್ಧವಾದ ಜೀವನಕ್ಕೆ ದಾರಿಯಂತೆ ಸಾಗುತ್ತಿದ್ದವು.
ಅಂದು ಅಂತಹ ವಾತಾವರಣವಿತ್ತು ಎಂದು ಇಂದಿನವರಿಗೆ ಹಿರಿಯರು ಹೇಳಿದ್ದರೇ ಹೌದಾ!!! ಎಂದು ಆಶ್ಚರ್ಯ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಆಧುನಿಕತೆ ಬೆಳೆದು ನಿಂತಿದೆ. ಅದನ್ನು ನಂಬುವ ಮನಸ್ಸು ಇಲ್ಲವಾಗಿದೆ, ಅದು ಒಂದು ಕಲ್ಪನೆ ಎನ್ನುವಷ್ಟರಮಟ್ಟಿಗೆ ಬದಲಾಗಿದೆ.  ಇಷ್ಟೊಂದು ಬದಲಾವಣೆ ಕೇವಲ 25-35 ವರ್ಷಗಳೊಳಗೆ, ಇಷ್ಟೆಲ್ಲ ಆಧುನಿಕತೆಯನ್ನು ಒಪ್ಪಿಕೊಳ್ಳುವುದರ ಜೊತೆ ಜೊತೆಯಲ್ಲಿ ನಮ್ಮಲ್ಲಿಯು ಮಾನವೀಯತೆಯ ಗುಣಗಳು ಹೆಚ್ಚು ಹೆಚ್ಚು ಬೆಳೆಯಬೇಕಾಗಿತ್ತು, ಆದರೆ ಮಾನವೀಯತೆ ಕ್ಷೀಣಿಸಿ, ಅಂತಹ ಗುಣಗಳನ್ನು ಹುಡುಕುವಷ್ಟರ ಮಟ್ಟಿಗೆ ಹಾಳಾಗಿಬಿಟ್ಟಿದೆ. ಆಧುನಿಕತೆ ಯುಗ ಮಾತ್ರ ಭರದಿಂದ ಬೆಳೆಯುತ್ತಾ ಸಾಗುತ್ತಿದೆ ಎಷ್ಟೊಂದು ಬದಲಾವಣೆಗಳು...  ಜೀವನವೆಂಬ ನಾಟಕರಂಗದಲ್ಲಿ ಏನೆಲ್ಲ ಏರು-ಪೇರುಗಳು ಅಲ್ಲವೇ? 

ಅಜ್ಜ-ಅಜ್ಜಿ


ಗೋಧೂಳಿಯಲ್ಲಿ
ರಾಸುಗಳ ಕಲರವ
ಮಂದಬೆಳಕಿನ
ಮನೆಯೊಳಗೆ
ಅಜ್ಜಿಯ ರಸಗವಳದ
ತಯಾರಿ

ಅಜ್ಜನ ಮನದ
ಮೂಲೆಯಲ್ಲಿದ್ದ
ನಾಟಕದ
ಪದಗಳ ಭಾವ
ಮೊಮ್ಮಕ್ಕಳೊಂದಿಗೆ
ಅನಾವರಣ

ಅದರರಿವು ಅರಿಯದ
ಮೊಮ್ಮಕಳಿಗೆ
ಅಜ್ಜನ ಅಭಿನಯ,
ಪದಗಳ ಮೂಲಕ
ವಿವರಣಾತ್ಮಕ
ಭಾವದ ಅನಾವರಣ

ಅಜ್ಜ-ಅಜ್ಜಿಯ
ಭಾವ ತುಂಬಿದ
ರಸದೌತಣ
ಸವಿದ ಮೊಮ್ಮಕಳಲ್ಲಿ
ಧನ್ಯತಾ ಭಾವ

ಅಂದು ಇದ್ದ
ನೈಜತೆಯ ಲೋಕ
ಇಂದು ಈಗ
ಬರಿದಾಗುತಿಹ
ಭಾವ ಎದೆಯೊಳಗೆ
ಕಾಡುತಿಹುದು...!!!

Tuesday, 14 August 2012

ಜಾತಿ

" ಎಲ್ಲಿತ್ತೊ? ಹೇಗಿತ್ತೊ?
ಒಂದು ಗೊತ್ತಿಲ್ಲ
ಕಟ್ಟುಪಾಡಿಗಳಿಗಾಗಿ
ಹುಟ್ಟಿಕೊಂಡಿತೋ?
ರೀತಿ ನೀತಿಗಳಿಗಾಗಿ
ಹುಟ್ಟಿಕೊಂಡಿತೋ?
ಸಾಮರಸ್ಯದ ಬದುಕಿಗಾಗಿ
ಹುಟ್ಟಿಕೊಂಡಿತೋ?
ಒಂದು ಗೊತ್ತಿಲ್ಲ
ಹುಟ್ಟಿಕೊಂಡಾಗ ಇರಲಿಲ್ಲ
ಕಲ್ಮಶದ ಮನಸ್ಸು
ಓ.... ಜಾತಿಯೆಂಬ
ವಿಷ ಬೀಜವೇ
ನೀ ಬೆಳೆದು ಹೆಮ್ಮರವಾಗಿ
ಅಧಿಕಾರವೆಂಬ ದಾಹಕ್ಕೆ
ಬಲಿಯಾಗಿರುವೇ
ಮನುಕುಲದ ಅಳಿವಿಗೆ
ಕಾರಣವಾಗಿರುವೇ
ನಿನಗೆ ಕೊನೆಯಿಲ್ಲವೇ ..!?"

ಸೋಲು, ಗೆಲುವು

ಸೋಲು, ಗೆಲುವು ಎಂಬುದು ಒಂದು ಸ್ಥಿತಿ, ನಾವು ಅದನ್ನು ಎಚ್ಚರಿಕೆಯಿಂದ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಗೆದ್ದಾಗ ಸಂತೋಷ ಪಡುವ, ಸೋತಾಗ ಕೆಳಗುಂದುವ ಮನಸ್ಥಿತಿಯನ್ನು ಮೊದಲು ಬಿಡಬೇಕು, ಎರಡನ್ನು ಕೂಡ ನಾವು ಪ್ರೀತಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಗೆಲುವು ಇನ್ನೊಂದು ಗೆಲುವಿಗೆ ಸೋಪಾನವಾದರೆ, ಸೋಲು ಎಡವಿದ ದಾರಿಯನ್ನು ಎತ್ತಿ ತೋರಿಸಿ, ಇನ್ನೊಂದರ ಏಳ್ಗೆಗಾಗಿ ಶ್ರಮಿಸುತ್ತದೆ. ಸೋಲು-ಗೆಲುವು ಎರಡು ಶಾಶ್ವತವಾಗಿ ಇರುವ ಸ್ಥಿತಿಯಲ್ಲ, ಅಂತಹ ಶಾಶ್ವತವಲ್ಲದ ಸ್ಥಿತಿಗಾಗಿ ಸೋತ...
ಾಗ ನಾವು ಏನೋ ಕಳೆದುಕೊಂಡಂತಹ ಸ್ಥಿತಿ ನಿರ್ಮಾಣ ಮಾಡಿಕೊಂಡಲ್ಲಿ ನಮ್ಮ ಕಾಲವನ್ನು ಅದಕ್ಕಾಗಿ ವ್ಯಯ ಮಾಡಿದಂತಾಗುತ್ತದೆ, ಇಲ್ಲಿ ಕಾಲ ಮುಖ್ಯ ಅದರ ಸದ್ಬಳಕೆ ಮುಖ್ಯ, ಅದರರಿವು ನಮಗಾಗಬೇಕು ಅಷ್ಟೇ. ಯಾವುದೇ ಸ್ಥಿತಿಯನ್ನು ಸಮಾನ ಮನಸ್ಥಿತಿಯಲ್ಲಿ ಕೊಂಡೊಯ್ಯಬೇಕು. ಎಲ್ಲವನ್ನು ನಗುನಗುತ್ತಾ ಸ್ವೀಕರಿಸುವುದು ಮುಖ್ಯ. ನಾವು ನಮ್ಮ ಇನ್ನೆಷ್ಟು ಗೆಲುವು, ಇನ್ನೆಷ್ಟು ಸೋಲುಗಳನ್ನು ಎದುರುಗೊಳ್ಳಲು ಕಾರಣೀಭೂತರಾಗಬೇಕೋ ಗೊತ್ತಿಲ್ಲ... ಸೋತಾಗ ನಮ್ಮನ್ನು ನಾವು ಎಚ್ಚರದಿಂದ ಮುನ್ನೆಡೆಸುವ ಸ್ಥೈರ್ಯ ಬೆಳೆಸಿಕೊಳ್ಳಬೇಕು...

ಅರ್ಥವಾಗದ ಮಾತುಗಳು

ಅರ್ಥವಾಗದ ಮಾತುಗಳು:- ಸತ್ತಾಗ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದು? ಯಾರೇ ಸತ್ತರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರೆ ಇರುವವರೆಗೂ ಅವರ ಆತ್ಮ ನೆಮ್ಮದಿಯಿಂದ ಇರಲಿಲ್ಲವೇ? ನೆಮ್ಮದಿ ಕಂಡುಕೊಳ್ಳಲು ಬರಲಿಲ್ಲವೇ? ನೆಮ್ಮದಿ ಬದುಕು ಅವರದಾಗಿರಲಿಲ್ಲವೇ? - ಶಾಂತಿ, ನೆಮ್ಮದಿಗಳಿಲ್ಲದ ಆತ್ಮದ ಹುಟ್ಟು ಯಾಕಾಗಿ ಎನ್ನುವ ಪ್ರಶ್ನೆ ಮೂಡುವುದಿಲ್ಲವೇ? ಸಾವಿನಲ್ಲಿ ಆತ್ಮಕ್ಕೆ ಶಾಂತಿ ಸಿಗುವುದಾದರೆ ಸಾವೇ ಪರಿಹಾರವೇ? ಇವೆಲ್ಲವೂ ಗೊಂದಲದ ಗೂಡಾಗಲಿಲ್ಲವೇ... ಸಾವಿನಲ್ಲಿ ಲೀನವಾಗುವುದು ದೇಹ ಮಾತ್ರ... ಆತ್ಮಕ್ಕೆ ಸಾವು ಎನ್ನುವುದು ಗೋಚರವಾಗದ ಸತ್ಯ...!!! ಅದರರಿವು ನಮಗಾಗಬೇಕು... ಇರುವತನಕ ನೆಮ್ಮದಿಯ ಬದುಕು ನಮ್ಮದಾಗಿರಬೇಕು ಅಲ್ಲವೇ???

ಸುಳ್ಳು-ಸತ್ಯ

ಸುಳ್ಳು ಎನ್ನುವುದು ಏನು? ಸತ್ಯ ಎನ್ನುವುದು ಏನು ಎನ್ನುವುದು ನಮ್ಮ ಮನಸ್ಸಿಗೆ ಗೊತ್ತಿರುತ್ತದೆ... ಸತ್ಯ ಕಹಿಯಾಗಿದ್ದರೂ ಅದನ್ನು ಅರಗಿಸಿಕೊಳ್ಳುವ ಮನಸ್ಸು ಬೇಕು... ಸುಳ್ಳು ಹೆಚ್ಚು ಹಿತವಾಗಿದ್ದರೂ ಅದನ್ನು ತೇಜಿಸುವ ಮನಸ್ಸು ಬೇಕು... ಸುಳ್ಳನ್ನು ತುಳಿದು ಸತ್ಯದ ಹಾದಿ ಹಿಡಿಯಬೇಕಾದರೇ... ಸುಳ್ಳು ಸತ್ಯದ ಬುನಾದಿಯಾಗಿಯೇ ಕೆಲಸ ಮಾಡಿ ಸತ್ಯದ ಅರಿವಾಗಲು ಸಹಾಯ ಮಾಡುತ್ತಾ ಸಾಗುತ್ತದೆ... ಎಂತಹ ವಿಪರ್ಯಾಸ ಅಲ್ಲವೇ!!!

ಕಾಲ-ಅಜ್ಜಿ

ಬದುಕಿಹಳು
ಬಡಕಲ ದೇಹದ ಅಜ್ಜಿ
ಕಾಲ ಕರೆಯಲಿಲ್ಲ
ಎಂಬ ನೋವು ಆಕೆಗೆ
ಅಜ್ಜಿಗೆ ಇಲ್ಲ ತನ್ನವರು
ಇದ್ದರು ಇಲ್ಲದಂತಿಹಳು

ದಿನದೂಟಕ್ಕೆ ಅವರಿವರು
ನೀಡುವ ಅನ್ನವೇ ಮೃಷ್ಟಾನ್ನ
ಮನೆಯ ಹಾದಿಬದಿಯಲ್ಲಿ
ಹೋಗುವ ಮಕ್ಕಳೇ
ಈ ಅಜ್ಜಿಯ
ಮನಕ್ಕೆ ಚೈತನ್ಯ...

ಯಾರು ಯಾರಿಗೆ
ಅನಿವಾರ್ಯ ಗೊತ್ತಿಲ್ಲ
ಇವಳಿಗೆ ಬದುಕುವುದು
ಅನಿವಾರ್ಯ...
ಕಾಲ ಮಾತ್ರ ಕರೆಯಲಿಲ್ಲ
ಕಾಲದ ನಿರೀಕ್ಷೆಯಲ್ಲಿಹಳು
ಬಡಕಲ ದೇಹದ ಅಜ್ಜಿ...

ಅಂತಃಕರಣ

ಅಂತಃಕರಣ
ತುಂಬಿದ
ಆ ತಾಯಿ
ಧಾರಳ...

ಅಂತಃಕರಣ
ತುಂಬಿದ
ಆ ತಾಯಿ
ನೀಡಿದ ತಂಗಳನ್ನವು
ಮೃಷ್ಟಾನ್ನವಿದ್ದಂತೆ...

ಅಂತಃಕರಣ
ತುಂಬಿದ
ಆ ತಾಯಿ ಆಡಿದ
ಒಂದೊಂದು ಪ್ರೀತಿಯ
ನುಡಿಗಳು
ಮುತ್ತುಗಳಿದ್ದಂತೆ...

ಅಂತಃಕರಣ
ತುಂಬಿದ ಆ ತಾಯಿ
ತನಗಾಗಿ 
ಏನನ್ನೋ ಬಯಸಲಿಲ್ಲ
ಎಲ್ಲರಲ್ಲೂ
ಪ್ರೀತಿಯ ನುಡಿಗಳನ್ನ
ಬಯಸಿದಾಳಾ ತಾಯಿ...

ಪ್ರೀತಿ ತುಂಬಿದ
ಭಾವದಿಂದ
ಸತ್ಕಾರವಿಯ್ಯುವ
ಆ ತಾಯಂದಿರ ಇರುವಿಕೆಯೇ
ಸಂಸ್ಕಾರವೆಂಬ ಭಾವ
ಅಡಗಿಹುದು ಇನ್ನೂ ಇಲ್ಲಿ...!!!

ಅಭಿಮಾನ

ನಾ ಏನೂ
ಕೊಡದಿದ್ದರೂ
ನಿನ್ನ ಆಂತರ್ಯ
ನನ್ನ ಶ್ರೇಯಸ್ಸನ್ನೆ
ಬಯಸುತ್ತಿದ್ದರೇ
ಅದಕ್ಕಿಂತ
ಭಾಗ್ಯವುಂಟೇ..
ನಿನ್ನ ಆಂತರ್ಯದ
ನನ್ನ ಬಗೆಗಿನ
ಕಾಳಜಿಗೆ
ನಾ ಕೊಡುವಾ
ಕಾಣಿಕೆ
ನನ್ನ ನಮ್ರತೆಯೇ
ಹೊರತು
ಮತ್ತೇನಿದೆ ಹೇಳು...!?

ಸತ್ಯ-ಸುಳ್ಳು

ಸತ್ಯ ಕಹಿಯಾಗಿಹದು
ಸುಳ್ಳು ಸಿಹಿಯಾಗಿಹದು
ಸತ್ಯ ಮನಸ್ಸಿನ
ನಿರಾಳತೆಯೊಂದಿಗೆ
ಜೊತೆಗೂಡಿಹದು
ಸುಳ್ಳು ಮನಸ್ಸಿನ
ಮೂಲೆಯಲ್ಲಿ ನೆಲೆಸಿ
ಕೊರೆಯುವಿಕೆಯೊಂದಿಗೆ
ಜೊತೆಗೂಡಿಹದು
ಸುಳ್ಳಿನ ಪರಾಮವಧಿ
ನಮ್ಮ ಬದುಕಿಗೆ
ಧಕ್ಕೆ ತಂದಿಹದು
ಸತ್ಯದೊಂದಿಗಿನ
ಅಚಲವಾದ
ಜೊತೆಗೂಡುವಿಕೆ
ಕಲ್ಮಶವಿಲ್ಲದ
ಭಾವದೊಂದಿಗಿನ
ಮನಸ್ಸಿನ ಅರಿವಿಕೆಯೊಂದಿಗೆ
ಜೊತೆಗೂಡಿಹದು!!!

ತಾಯಿ ಮತ್ತು ಮಗು

ಬಾಲ್ಯದಲ್ಲಿ ಮಗುವಿನ ತಪ್ಪಿಗೆ ಕೊಡುವ ಪೆಟ್ಟು, ಯಾವುದೇ ಪರಿಣಾಮ ಬೀರುವುದಿಲ್ಲ. ಅದರ ಮನಸ್ಸು ತಪ್ಪು-ಸರಿ ವಿಚಾರ ಮಾಡುವ ಶಕ್ತಿ ಇನ್ನು ಬೆಳೆದಿರುವುದಿಲ್ಲ, ಆ ಕ್ಷಣ ಹೆತ್ತ ತಾಯಿ ಗದರಿಸಿದ್ದಕ್ಕೆ ಹೊಡೆದಿದ್ದಕ್ಕೆ, ಬೈಯಿದ್ದಕ್ಕೆ ಅಲ್ಲಿ ಜಾಗವೇ ಇರುವುದಿಲ್ಲ, ಅದನ್ನೆಲ್ಲ ಮರೆತು, ಮರುಕ್ಷಣವೇ ಮಗುವಿನ ಬಾಯಲ್ಲಿ ಬರುವ ತೊದಲು ನುಡಿಗಳು, ನೋವಿನಲ್ಲು ಸಹಜವಾದ ಕ್ರಿಯೆಯನ್ನು ವ್ಯಕ್ತಪಡಿಸಿ ಹೆತ್ತೊಡಲನ್ನು ಸೇರಿಬಿಡುತ್ತದೆ. ಮಗುವಿನ ಅಂತಃಕರಣ ಯಾವಾಗಲೂ ತಾಯಿಯನ್ನು ಬಯಸುತ್ತದೆ, ಮಗುವಿನಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಅಂತಹ ನಿರ್ಮಲವಾದ ಮನಸ್ಸು, ನಿಷ್ಕಲ್ಮಶ ತುಂಬಿದ ಭಾವ, ಆ ಮನಸ್ಸು ಯಾವಾಗಲೂ ಹೆತ್ತೊಡಲನ್ನು ಬಯಸುತ್ತದೆ. ಅಂತಹ ಸ್ಥಿತಿಯಲ್ಲಿ ತಾಯಿಯಲ್ಲಿ ಬರುವ ಕಣ್ಣೀರು ಮನದಾಳದ ನೋವನ್ನು ಬದಿಗೊತ್ತಿಬಿಡುತ್ತದೆ...!!!

ಆಶಾದಿವಿಗೆ

ಮನದ
ಮೂಲೆಯಲ್ಲಿರುವ
ಅದೆಷ್ಟೋ
ಆಶಾದಿವಿಗೆಗಳ
ಕಂತೆ
ಒಂದೊಂದು
ಕಂತೆಯ
ಬಿಚ್ಚುತ್ತಾ
ಸಾಗುವ
ಕಾಲ
ಅಲ್ಲಿರುವ
ಒಂದೊಂದು
ಕೂಡ
ಬದುಕಿನ
ಏರಿಳಿತಗಳ
ಸರಮಾಲೆ...!!!???

ನೂರೆಂಟು

ನೂರೆಂಟು
ಭಾವಗಳು
ನೂರೆಂಟು
ಕನಸುಗಳು
ನೂರೆಂಟು
ಆಸೆಗಳು
ನೂರೆಂಟು
ಬಯಕೆಗಳು
ಎಲ್ಲವೂ
ಮುಗಿದಾಗ
ನೂರೆಂಟು
ಗೊಂದಲಗಳು..???

ಚೌಕಟ್ಟು

ಸೀಮಿತದಲ್ಲಿ
ಬಂಧಿತವಾಗಿಹ ಮನ
ಅದಬಿಟ್ಟು ಹೊರಬರುವ
ತವಕವಿಲ್ಲದ ಮನಕ್ಕೆ
ಪೇರಪಿಸುವ ಶಕ್ತಿಯು
ಕುಂದಿಹ ಭಾವ...
ಚೈತನ್ಯದರಿವಿನೋ
ಕೊರತೆಯೋ?
ಅದರಾಚೆಯ ಅರಿವಿನ
ಕುತೂಹಲವಿಲ್ಲದ
ಭಾವದ ಕೊರತೆಯೋ?
ತನ್ನರಿವೇ ಹೆಚ್ಚೆಂಬ ಅಹಂ
ಜಾಗೃತವಾಗಿದೆಯೋ?
ಅರಿಯದಾಗಿಹ ಮನಕ್ಕೆ
ಸೀಮಿತವನ್ನ
ಕಿತ್ತೊಗೆಯುವ
ಮನಸ್ಸು
ಏರ್ಪಡಬೇಕಾಗಿಹದಿಲ್ಲಿ..!!

ಸಂಗೀತ

ಆಲಿಸುವ ಮನಕ್ಕೆ
ಸೊಗಸಾದ
ಸಂಗೀತದ
ಹುಡುಕಾಟ
ಒಂದೊಂದು
ಸಂಗೀತದಲ್ಲಿ
ಮನಸ್ಸಿನ
ಹಲವು ಭಾವಗಳ
ಅನಾವರಣ
ಮನಸ್ಸಿನ
ಹಗುರತೆಯಲ್ಲಿ,
ತನ್ಮಯತೆಯಲ್ಲಿ
ನಿನ್ನ ಪಾಲೆ
ಹೆಚ್ಚಿಹುದು
ಓ ಮಾರ್ಧುಯಭರಿತ
ಸಂಗೀತವೇ
ನಿನ್ನಲ್ಲಿ ನನ್ನ
ಮನವು
ಒಂದಷ್ಟು ಕ್ಷಣ
ನಿರಾಳವಾದಂತೆ
ಭಾಸವಾಗಿಹುದು...!!!

ಕಲ್ಪನಾಲೋಕ

ಚಿತ್ರ ವಿಚಿತ್ರ
ಕಲ್ಪನೆಗಳು
ಒಂದಕ್ಕೊಂದು
ಸಂಬಂಧವಿಲ್ಲದೆ
ಎಲ್ಲವೂ
ಮನದಿಂದ
ಬಂದಿಹುದು
ಯಾವುದು
ಯಾಕಾಗಿ
ಎಂಬುದರಿವಿಲ್ಲ
ಬಂದವೆಲ್ಲವೂ
ಒಂದು ರೀತಿಯ
ಗೊಂದಲವೇ
ಇಷ್ಟೆಲ್ಲವೂ
ಎಲ್ಲಿತ್ತೋ
ಒಂದು ಗೊತ್ತಿಲ್ಲ
ಆದರೆ, ಬರುವುದು
ಮಾತ್ರ ಇನ್ನು
ನಿಂತಿಲ್ಲ..!!!

ಮೋಡ

ನವ ನವೀನಾ
ಚಿತ್ತಾರಗಳು
ಕಲೆಗಾರನ
ಕೈಚಳಕವಿಲ್ಲ
ಎಲ್ಲಿಯೂ ಬಣ್ಣದ
ಲೇಪವಿಲ್ಲ
ಚಿತ್ತಾರ ಸೃಷಿಗೆ
ಕಾಗದದ
ಅಗತ್ಯವಿಲ್ಲ
ಎಲ್ಲ ಕಡೆಯ
ಬಗೆ ಬಗೆಯ
ಚಿತ್ತಾರಗಳ
ಅನಾವರಣ
ಕ್ಷಣಕ್ಕೊಂದು
ನೋಟದ ಸೃಷ್ಟಿ
ಓ ಮೋಡವೇ
ನೀ ನೀಲಾಕಶದಲ್ಲಿ
ಅದೆಷ್ಟೋ
ಬಗೆ ಬಗೆಯ
ನೋಟವನ್ನ
ಸೃಷ್ಟಿಸಿಬಿಟ್ಟೆ...!!!

ಹಸಿವು

ಹಸಿವೇ ನೀನೆಷ್ಟು
ಘೋರ
ನಿನ್ನ ದಾಹ
ತಣಿಸಲು ಏನೆಲ್ಲ
ಮಾಡಬೇಕಾಗಿಹುದು
ದುಡಿಯುವ ಶಕ್ತಿ
ಕರುಣಿಸಿದ
ಕೈಗಳನೋ
ಹಸಿವು
ತಣ್ಣಿಸಿಕೊಳ್ಳವವು
ಶಕ್ತಿ ಕುಂದಿ
ಹೊರದೂಡಲ್ಪಟ್ಟ
ಹಿರಿ ಜೀವಗಳ
ಹಸಿವು ತಣ್ಣಿಸುವ
ಪರಿಯ ಕಂಡ
ಮನ ನೊಂದಿಹುದು
ಓ ದೇವರೆ
ನೀ ಸೃಷ್ಟಿಸಿದ
ಹಿರಿಯ ಚೇತನಗಳ
ಮೇಲೆ ಏಕಿಷ್ಟು ಕೋಪ
ಯಾಕೀ ಭಿನ್ನತೆಯೋ
ಹಸಿವಿನಿಂದ
ಕಂಗ್ಗೆಟ್ಟ ಜೀವ
ನಿನ್ನ ನೆನೆ ನೆನೆದು
ಮುಕ್ತಿ ಪಡೆಯಲೆಂಬ
ಬಯಕೆಯೇ
ಅರಿಯದಾಯಿತು
ಮನ....!!!

Saturday, 11 August 2012

ಒಲವು

ಯಾವುದು ನಮ್ಮವಲ್ಲ
ಎಲ್ಲವೂ ಇಲ್ಲೇ
ಬಿಟ್ಟುಹೋಗುವ
ಸ್ಥಿತಿಯಲ್ಲಿರುವ
ಐಹಿಕ ಮೋಹಗಳತ್ತ
ಯಾಕೀ ಅತೀಯಾದ
ಒಲವೋ ನಾ ಕಾಣೆ
ನಮ್ಮ ಜೊತೆ
ಬರುವುದರ
ಮೇಲಿರಲಿಲ್ಲವಲ್ಲ
ಒಂದಿಷ್ಟು ಕಾಳಜಿ
ಇದ್ದಿದ್ದರೇ ಅದೆಷ್ಟೋ
ಮುಗಿಲೆತ್ತರಕ್ಕೆ
ಏರುತ್ತಿತ್ತು ಮನ...!!!

ಕಟುಸತ್ಯ

ಕಟುಸತ್ಯ
ಅರಗಿಸಿಕೊಳ್ಳದ
ಮನ
ಸುಲಭವಾದ
ಸಿಹಿಯೆನಿಸಿದ
ದಾರಿ ಹೆಚ್ಚು
ಹಿತವೆನಿಸುತ್ತಾ
ಸಾಗುವುದು
ಶ್ರಮವಿಲ್ಲದ
ದಾರಿ ಸಾಗಿ
ಕಳೆದ ದಿನಗಳ
ತಿರುಗಿ ನೋಡಿದ
ಮನಕ್ಕೆ,
ಒಳಿತು-ಕೆಡುಕುಗಳ
ಲೆಕ್ಕಚಾರದಲ್ಲಿ
ಕೆಡುಕುಗಳು
ರಾರಾಜಿಸಿ
ಅಣುಕಿಸುತಿಹುದು..!!!

ದೃಷ್ಟಿ

ಇಂದು
ನಿನ್ನೆಯದಲ್ಲ
ನಿನ್ನ ಬಾಂಧವ್ಯ
ಹುಟ್ಟಿನಿಂದ
ಜೊತೆಯಲ್ಲಿರುವೆ
ನೀ ನೆಟ್ಟ
ಕಡೆಯಲೆಲ್ಲ
ನಾ ಮನಸ್ಸ
ಹಾಯಿಸಿರುವೆ
ನೀ ಸವಿದ
ಸವಿಯ ನನಗೂ
ಉಣ್ಣಬಡಿಸಿರುವೆ
ಓ ದೃಷ್ಟಿಯೇ
ನಿನ್ನ ನೋಡುತ್ತಾ
ನನ್ನ ಒಳ
ದೃಷ್ಟಿಯನ್ನೆ
ಮರೆತಿರುವೆ...!!!

ವ್ಯಾಮೋಹ

ಸಾವು ಅನಿರೀಕ್ಷಿತ
ಎನ್ನುವವರು
ಹಲ ಮಂದಿ
ಸಾವು ಅನಿರೀಕ್ಷಿತವೋ
ನಿರೀಕ್ಷಿತವೋ
ಒಂದು ಅರಿಯದ
ದೇಹ ಕೊನೆಯಲ್ಲಿ
ಲೀನವಾಗುವುದು
ಮಾತ್ರ ಸೃಷ್ಟಿಯಲ್ಲಿ
ಕೃಷವಾದ ದೇಹ
ಸಾವಿನ ಕೊನೆಯ
ದಿನಗಳ ಬಿಡುಗಡೆಗಾಗಿ
ಆತ್ಮದೊಂದಿಗಿನ ಬಾಂಧ್ಯವ
ಕಡಿದುಕೊಳ್ಳಲು ಅಣಿಯಂತೆ
ಸಜ್ಜುಗೊಂಡಂತಿಹದು
ಸೃಷ್ಟಿಯಲ್ಲಿ
ಲೀನವಾಗುವ ದೇಹದ
ಮೇಲಿನ ವ್ಯಾಮೋಹ
ಆತ್ಮಕ್ಕೆ ಯಾಕಾಗಿ?
ಜಿಜ್ಞಾಸೆಯೆಂಬ
ಭಾವವೆರ್ಪಟಿಹದು
ಅದರೊಟ್ಟಿಗೆ ಕಳೆದ
ಅನಿರೀಕ್ಷಿತ
ಫಲಾಫಲಗಳ
ಸಂಬಂಧವೆಂಬ
ಭಾವವೋ
ಏನೋ ಅರಿಯದಾಯಿತು
ಮನ....!!!

ಅನಾವರಣ

ಎಲ್ಲೊ ಹುಟ್ಟುವುದಿಲ್ಲ
ಹುಟ್ಟುವುದು ಮನಸ್ಸಿನಲ್ಲಿ

ಹುಟ್ಟಿದೆಲ್ಲಕ್ಕೂ 
ಅರ್ಥವಿರುವುದಿಲ್ಲ
ಅರ್ಥವಿರುವುದಕ್ಕೆಲ್ಲ 
ಭಾವನೆಗಳಿರುವುದಿಲ್ಲ

ಭಾವನೆಗಳಿರುವುದೆಲ್ಲ
ಒಳ್ಳೆಯದಾಗಿರುವುದಿಲ್ಲ
ಆಯ್ಕೆಯಲ್ಲಿರಬೇಕು
ಸರಿ-ತಪ್ಪುಗಳ ಲೆಕ್ಕಚಾರ

ಯೋಚಿಸುವ ಶಕ್ತಿಯಿರುವ
ಮನಸ್ಸಿಗೆ ತನ್ನೊಳಗಿರುವ
ಒಳಿತುಗಳ ಅನಾವರಣಕ್ಕೆ
ಮನ ಪುಷ್ಠಿ
ನೀಡಬೇಕಾಗಿಹುದು...!!!

ಮೌಲ್ಯಯುತ ಬದುಕು

ವೇಷ ಭೂಷಣ
ತೋಡಿಗೆಯಲ್ಲಿ
ಇಲ್ಲದಿಹುದು
ವೈಯುಕ್ತಿಕ ನಿಲುವು

ಹಣ-ಐಶ್ವರ್ಯ
ಇರುವ ಕಡೆ
ಅಡಗಿಲ್ಲದಿಹುದು
ಮಾನವಿಯತೆ

ತೋರ್ಪಡಿಕೆಯ
ಜೀವನಕ್ಕಂಟಿಕೊಂಡಿರುವ
ಕಡೆ ಇಲ್ಲದಿಹುದು
ಮೌಲ್ಯಯುತ ಬದುಕು

ಇಲ್ಲದಿಹ ಕಡೆ
ಮೌಲ್ಯಯುತ ಬದುಕ
ಹುಡುಕಿದರೇ
ಸಿಗುವುದೇ?

ತೋರಿಕೆಯ
ಪ್ರಪಂಚದರಿವಿಲ್ಲದೆ
ನೈಜತೆಯ
ಬದುಕ ಸವೆಸವವರಡೆ
ಒಮ್ಮೆ ಕಣ್ಣಾಯಿಸಿದಾಗ
ಎಲ್ಲವೂ ಅಲ್ಲಡಗಿಹುದು...!!!

ಹಗಲುಗನಸು

ಒಂದಷ್ಟು ಹೊತ್ತು
ತಂದಿರುವೆ
ಹಗಲುಗನಸ್ಸನ್ನ
ಅದರಲ್ಲಿ
ಸವಿಗನಸನ್ನ
ಆಯ್ದುಕೊಂಡಿರುವೆ
ನಾ... ಸ್ವಾರ್ಥಿಯಾಗಲಾರೆ
ನೀ... ದ್ವೇಷಿಯಾಗಬೇಡ
ಆಯ್ದುಕೊಂಡ ಕೆಲ
ಸವಿಗನಸು
ಸಾಕಾರಗೊಳ್ಳಲು
ನಿನ್ನ ಸಹಕಾರ
ಕೋರಿರುವೆ
ಅದ ಕರುಣಿಸೋ
ಕಾಯಕವ ನೀ
ಹೊತ್ತಿರುವೆ
ನೀ ಕರುಣಿಸಿದರೇ
ಮತ್ತೆ ಮತ್ತೆ
ಹಗಲುಗನಸ ಕಾಣಲು
ಸಹಕಾರಿಯಾಗಿರುವೆ...!!!

ಭಿನ್ನತೆ

ಸೃಷ್ಟಿಯ
ಸೃಷ್ಟಿಸಿ
ಬಟ್ಟ
ಬಯಲಾಗಿಟ್ಟಿರುವೆ

ನೋಡುವ
ಕಣ್ಣಗಳಿಗೆ
ಹಲ ಭಾವ
ತುಂಬಿರುವೆ

ಭಾವದರಿವ
ಅವರವರ
ಮನಸ್ಸಿಗೆ
ಬಿಟ್ಟಿರುವೆ

ಒಂದು
ಮನಸ್ಸಿನಂತೆ
ಮತ್ತೊಂದರ
ಮನಸ್ಸಿನ
ಕಲ್ಪನೆಗಳು
ಭಿನ್ನವಾಗಿಹದಿಲ್ಲಿ

ಕಲ್ಪಿಸಿಕೊಳ್ಳುವ
ಮನಸ್ಸು
ನೋಡುವ
ಮನಸ್ಸು
ಎಲ್ಲವೂ ಭಿನ್ನ ಭಿನ್ನ

ಅದಕ್ಕೆ
ಸೃಷ್ಟಿಯಲ್ಲಿ
ಹೊಂದಾಣಿಕೆ
ಭಾವ
ಕೊರತೆಯಾದಂತೆ
ಭಾಸವಾಗಿಹುದು!!!

ಅಂದು-ಇಂದು

ಮಣ್ಣಲ್ಲಿ ಹುಟ್ಟಿ
ಮಣ್ಣಲ್ಲಿ ಒಂದಾಗುವ
ದೇಹದೊಂದಿಗಿನ ನಂಟು
ಆಯ್ದುಕೊಂಡ
ಮಾರ್ಗ ಹಲವು

ಸಾರ್ಥಕತೆಯ
ಹಾದಿ ಹುಡುಕಿದ
ಮಹಾತ್ಮರು
ಮಣ್ಣಿಗಾಗಿ
ತನು-ಮನ
ಧನವನ್ನೆಲ್ಲಾ
ಅರ್ಪಿಸಿದರವರು
ಅಂದು

ಆ ಅರ್ಪಣೆಯೇ
ಭಾವವೇ
ನೆಲ, ಜಲ
ನೈಸರ್ಗಿಕ
ಸಂಪತ್ತು ಎಲ್ಲವೂ
ಸವಿಯುತ್ತಿರುವ
ಜೊತೆ ಜೊತೆಯಲ್ಲಿಯೇ
ಸ್ವಾತಂತ್ರ್ಯ
ಪರಿಧಿಯೊಳಗೆ
ಬೆಚ್ಚಗಿರುವೆವು
ಇಂದು

ಬೆಚ್ಚನೆಯ
ಸವಿಯ
ಸವಿಯುತ್ತಾ
ಇಂದು
ಪ್ರಕೃತಿಯ
ಮಡಿಲಿಗೆ
ಆಧುನಿಕತೆಯೆಂಬ
ಸೋಗಿನಲ್ಲಿ
ಬೆಂಕಿಯಿಡುತಿಹೆವು

ಸ್ವಾತಂತ್ರ್ಯದ
ಪರಿಧಿಯೊಳಗಿರಬೇಕಾದ
ಮನಸ್ಸು
ಅದ ಮೀರಿ
ತನ್ನ ಸ್ವಾರ್ಥದ
ಪರಿಧಿಯೊಳಗೆ
ಬಂಧಿಯಾಗಿ
ಪ್ರಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು

ನೈಜತೆಯ
ಭಾವವಿಲ್ಲದ
ಮನಸ್ಸು
ತೋರಿಕೆಯ
ಮೋಹಕ್ಕೆ
ಒಳಗಾಗಿ
ಸಂಸ್ಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು

ನೈತಿಕತೆಯಿಲ್ಲದ
ಸ್ವಾತಂತ್ರ್ಯವೆಂಬುದಿಲ್ಲಿ
ವಿಶಾಲವಾಗಿ
ಹೆಮ್ಮರವಾಗಿ
ಬೆಳದು
ಬುನಾದಿಯನ್ನೇ
ಅಲುಗಾಡಿಸುತಿಹದು
ಇಂದು...

Friday, 10 August 2012

ದಾನ

ನೀಡುವ
ಮನಸ್ಸಿರಬೇಕು
ಎನ್ನುವವರು
ಕೆಲ ಮಂದಿ

ಎಲ್ಲವೂ
ನೀಡುವ
ದೇವರು
ನಾವು ಕೊಡಲು
ಉಳಿಸಿರುವುದೇನು

ಅರಿಯದಾಯಿತು
ನಾ ಕೊಟ್ಟೆ
ನನ್ನಿಂದ
ನಿಮ್ಮಿಂದ
ಎನ್ನುವ
ಹಲ ಮಂದಿ

ನೀಡುವುದನ್ನ
ಎಲ್ಲಿಂದ
ತಂದರೋ
ಒಂದು
ಅರಿಯದಾದರು...!!!