ಕಣ್ಣಾಲಿಗಳಲ್ಲಿ ಹರಿದ ಹನಿ ನೀರು ಮಡುಗಟ್ಟಿದ ನೋವುಗಳ ಅನಾವರಣ ದುರ್ಬಲವಾದ ಮನಸ್ಸಿಗೆ ಶಕ್ತಿ ತುಂಬಿ ಹೊಸ ಚೈತನ್ಯ ಹೊಸ ಹುರುಪಿನೊಂದಿಗೆ ಒಡನಾಟಕ್ಕಾಗಿ ಹಾತೊರೆಯುವ ಮನಸ್ಸು ಹೊಸದರ ಹುಡುಕುವುದರೊಂದಿಗಿನ ಮತ್ತದೇ ಒಡನಾಟ...!!
ಅರ್ಥವಾಗದ ಬದುಕಿನ ರಹಸ್ಯಗಳು ಅರ್ಥವಾಗದ ಮನುಷ್ಯರ ಸ್ವಭಾವಗಳು ಬದುಕಿಗಾಗಿ ಅದೆಷ್ಟೋ ಒಡಂಬಡಿಕೆಗಳೋ... ತನ್ನೊಳಿತಿಗಾಗಿ ನಡೆ-ನುಡಿಗಳಲ್ಲಿ ಬದಲಾವಣೆಗಳೋ... ಎಲ್ಲವೂ ಅರ್ಥವಾಗದೇ ಹಾಗೆ ಉಳಿಯುವುದು ಅದನ್ನರಿಯುವಷ್ಟರಲ್ಲಿ ಕಾಲನ ಕರೆಯಲ್ಲಿ ಲೀನವಾಗುವುದು..!!!
ಬದುಕೆಂಬ ಮಾಯೆಯಲ್ಲಿ ಅಗಲಿಕೆಯ ನೋವು ಕಾಡುವುದು ಅಲೆ ಅಲೆಯಾಗಿ ಸಂಬಂಧಗಳ ಒಡನಾಟದಲ್ಲಿ ಕಳೆದ ಬದುಕಿನ ಋತುಚಕ್ರದಲ್ಲಿ ಬಿಗಿಯಾದ ಸಂಬಂಧಗಳ ಬಂಧನದಲ್ಲಿ ಒಂದೊಂದು ಕಳಚಿಕೊಂಡಾಗ ಸಮುದ್ರದ ಅಲೆ ಅಲೆಯಂತೆ ಬಂದಪ್ಪಳಿಸುವುದು ಅಪ್ಪಳಿಸಿದ ರಭಸಕ್ಕೆ ತತ್ತರಿಸಿ ತಲ್ಲಣಿಸುವುದು ಮನ..!!!
ನೀಡುವವನ ಆಳದರಿವಿದ್ದರೇ ನೀಡುವವನನ್ನೇ ಬರಿದು ಮಾಡಿ ಬಿಡುವ ಉತ್ಸಾಹ ತುಂಬಿಹುದು ಮನದಲ್ಲಿ ಭರಿಸಲಾಗದಷ್ಟು, ತೃಪ್ತಿ ಹೊಂದಲಾರದಷ್ಟು ಕನಸುಗಳ ಸಾಲು ಸಾಲು ಒಂದೇ ಎರಡೇ ತೃಪ್ತಿ ಇಲ್ಲದ ಭಾವದೊಂದಿಗಿನ ಒಡನಾಟ ಏಕೋ, ಏನೋ ಒಂದು ಗೊತ್ತಿಲ್ಲ ಬೇಡ ಎನ್ನುವುದಕ್ಕಿಂತ ಬೇಕು ಎನ್ನುವುದೇ ಎದ್ದು ಬಂದು ನಿಲ್ಲವುದು ಮನದಿಂದ...!!!
ಈರ್ಷ್ಯೆ ಕಳಚಿ ಬದುಕಬೇಕೆಂದಿರುವೆ ನನ್ನಲ್ಲಿ ಇಲ್ಲದ್ದು ಇತರರಲ್ಲಿ ಕಂಡಾಗ ಅದರ ಸವಿಯನ್ನ ಸ್ವೀಕರಿಸಬೇಕೆಂದಿರುವೆ ಬಣ್ಣ ಬಣ್ಣದ ಕನಸುಗಳನೊತ್ತ ಬದುಕಿನ ಚಿತ್ರಣವು ವಿಭಿನ್ನವಾಗಿರುವ ನೆಲೆಯಲ್ಲಿ ನನ್ನತನವ ನಾ ಹುಡುಕುತ್ತಾ ಇತರರ ಭಾವವ ಗೌರವಿಸುತ್ತಾ ಬದುಕ ಹಸನಾಗಿಸಬೇಕೆಂದಿರುವೆ ಓ ಮನಸ್ಸೇ ಸಹಕರಿಸಲಾರೆಯಾ?
ಬಲ್ಲವರೆನ್ನುವರು
ನಾ ಎಲ್ಲ
ಬಲ್ಲನೆಂದೂ
ಎಲ್ಲವೂ ತಿಳಿದೆ
ಎಂಬ ಭ್ರಮೆ
ಆವರಿಸಿದಾಗ
ಮನಸ್ಸಿನ
ಸಹಜತೆಯನ್ನ
ಕಳೆದುಕೊಳ್ಳುವುದಿಲ್ಲಿ
ಕಲಿಯುವ
ಭಾವವಿರುವವರೆಗೂ
ಉಲ್ಲಾಸದಿಂದಿಹದು
ಮನ...!!!
ಕಲಿತೆ ಎಂಬ
ಭ್ರಮೆ ಆವರಿಸಿದಾಗ
ಸೀಮಿತ
ಪರದೆಯೊಳಗೆ
ಬಂಧಿಯಾಗಿಹುದು
ಮನ....!!!
ಅನಿವಾರ್ಯವಲ್ಲದ ಬದುಕು ಭುವಿಗೆ ಬಂದಾಗ ಅರಿವಿಲ್ಲದ್ದು ಹೊರಟು ನಿಂತಾಗ ಅರಿವಿಲ್ಲದ್ದು ಎಲ್ಲವೂ ಒಂದು ಮಾಯೆಯೊ ಮಾಯೆಯೆಂಬ ಬದುಕೋ ಅರಿವಿಲ್ಲದ ಮನ ಅರಿಯುವ ಮುನ್ನ ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹ ಅರಿತಿದ್ದು ಮಾತ್ರ ಶೂನ್ಯವೆಂಬತಿಹುದು
ಕಾಲಗರ್ಭದಲ್ಲಿ ಸೇರುತಿಹುದು ಘಟನಾವಳಿಗಳು ಒಂದಷ್ಟು ಸವಿ ಒಂದಷ್ಟು ಕಹಿ ನೆನಪುಗಳು ಘಟಿಸಿದ ಘಟನಾವಳಿಗಳು ಮಿಂಚಿ ಮರೆಯಾಗುತಿಹುದು ಹಳೆಯ ನೆನಪುಗಳೊಂದಿಗೆ ಹೊಸದರ ಅರಸುವಿಕೆಯ ನಡುವೆ ಬಂದಿದ್ದು, ಹೋಗಿದ್ದು ಮಾತ್ರ ಘಟನೆಗಳು ಕಾಲ ಮಾತ್ರ ಯಾವುದರ ಪರಿವೇ ಇಲ್ಲದೆ ಓಡುತಿಹುದು...!!!